ಕಥಾಸಾಹಿತ್ಯ : ಕಥಾತ್ಮಕವಾದ ಎಲ್ಲ ಸಾಹಿತ್ಯಕ್ಕೂ ಈ ಹೆಸರು ಸಲ್ಲುತ್ತದೆ. ಅಂದರೆ ಬಹುತೇಕ ಸಾಹಿತ್ಯವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕಥಾತ್ಮಕವಾಗಿಯೇ ಇರುತ್ತದೆ. ಕಥೆ ಇಲ್ಲದ್ದು ಶಾಸ್ತ್ರವೋ ಪ್ರಬಂಧವೋ ಆಗಿರುತ್ತದೆ. ಉದಾಹರಣೆಗೆ, ಪ್ರಪಂಚದ ಮಹಾಕಾವ್ಯಗಳೆಲ್ಲ ಕಥೆಗಳೇ. ರಾಮಾಯಣ, ಮಹಾಭಾರತ, ಇಲಿಯಡ್, ಒಡಿಸ್ಸಿ, ಈನಿಯಡ್ ಮೊದಲಾದುವು ದೊಡ್ಡ ಕಥೆಗಳು. ಅನೇಕಾನೇಕ ವೀರಾಧಿವೀರರು ನಡೆಸಿದ ಸಾಹಸ ಕಾರ್ಯಗಳು, ಅವರ ಏಳು ಬೀಳುಗಳು, ಉತ್ಕರ್ಷಗಳು-ಇವುಗಳಿಂದಾಗಿ ಬಹು ಕಾಲ ಬಹು ಭಾಗಗಳಲ್ಲಿ ನಡೆದ ಅವರ ಚರಿತ್ರೆಗಳ ಹರಹನ್ನು ಇಲ್ಲಿ ನಾವು ಕಾಣಬಹುದು. ಈ ಬೃಹತ್ ಕಥೆಗಳಲ್ಲಿ ಸಣ್ಣ ಪುಟ್ಟ ಕಥಾನಕಗಳು, ಉಪಾಖ್ಯಾನಗಳು ದೃಷ್ಟಾಂತ ಕಥೆಗಳು ಬರುತ್ತವೆ. ಇವು ಪದ್ಯಾತ್ಮಕವಾಗಿಯೇ ಇರುವುದು ಇನ್ನೊಂದು ಸ್ವಾರಸ್ಯ ಕಥೆ ನಿಜವಾಗಿ ಗದ್ಯದಲ್ಲೂ ಇರಬಹುದು. ಮಹಾಕಾವ್ಯಗಳಂತೆ ಪುರಾಣಾದಿಗಳೂ ಕಥಾಸರಿತ್ಸಾಗರಗಳೇ ಆಗಿವೆ. ವ್ಯಕ್ತಿಚರಿತ್ರೆ, ಕ್ಷೇತ್ರಮಹಾತ್ಮ್ಯ-ಮೊದಲಾದ ಅನೇಕಾನೇಕ ವಿಷಯಗಳಿಂದ ಅವು ಪರಿಪುಷ್ಟವಾಗಿವೆ. ನೀತಿ, ತತ್ತ್ವ, ಮತಧರ್ಮಗಳ ಬೋಧನೆಗಾಗಿ ಅವು ಜನ್ಮ ತಾಳಿದುವು.

ಇವಲ್ಲದೆ ಕಥೆಗೆ ಇನ್ನೂ ಹಿಂದಿನ ಮೂಲವೆಂದರೆ ವೇದೋಪನಿಷತ್ತುಗಳು, ವೇದಗಳಲ್ಲಿಯೇ ಸಾಕಷ್ಟು ಕಥೆಗಳಿವೆ. ಉಪನಿಷತ್ತುಗಳಲ್ಲಿ ಕಥೆಗೆ ಅನಿವಾರ್ಯವಾದ ಪ್ರಾಶಸ್ತ್ಯ ಬಂದಿದೆ. ಉಜ್ಜ್ವಲವಾದ ಕಥಾನಕಗಳ ಪರಂಪರೆಯನ್ನು ನಾವು ಅಲ್ಲಿ ಕಾಣುತ್ತೇವೆ.

ಕಥೆಯ ಮೂಲ ಇನ್ನೂ ಹಿಂದಿನದೆಂದು ವಿದ್ವಾಂಸರ ಅಭಿಪ್ರಾಯ. ಮಾನವನ ಕಲಾಮೂಲವಾದ ಜಾನಪದದಲ್ಲಿ ವೈವಿಧ್ಯಮಯವಾದ ಕಥಾಸಾಹಿತ್ಯ ಅಡಗಿದೆ. ಪ್ರಕೃತಿಯ ವಿವಿಧ ವ್ಶೆಚಿತ್ರ್ಯಗಳನ್ನು ವರ್ಣಿಸಲು, ಒಗಟುಗಳನ್ನು ಬಿಡಿಸಲು, ಅಂದಿನ ಸಾಮಾಜಿಕ, ಧಾರ್ಮಿಕ, ನೈತಿಕ ಶಿಷ್ಟಾಚಾರಗಳನ್ನು ಸ್ಪಷ್ಟಪಡಿಸಲು ವಿಧವಿಧವಾದ ಕಥೆಗಳು ಹುಟ್ಟಿವೆ. ನೀತಿಕಥೆ (ಫೇಬಲ್), ಅಜ್ಜಿಕಥೆ (ಫೋಕ್ಟೇಲ್), ಕಟ್ಟುಕಥೆ (ಮೆರ್ಖನ್), ಮೊದಲಾದ ಬಗೆಗಳು ಪದ್ಯಗದ್ಯಗಳೆರಡರಲ್ಲೂ ಸಿಗುತ್ತವೆ. ಈ ಬಗೆಯ ಸಾಹಿತ್ಯ ಎಲ್ಲ ಜನಾಂಗಗಳಲ್ಲೂ ಉಂಟು. ಎಷ್ಟೋ ವೇಳೆ ಎಲ್ಲ ಕಥೆಗಳೂ ಸ್ಥೂಲವಾಗಿ ಒಂದೇ ಮಾದರಿಯದಾಗಿ ಕಾಣಬಹುದಾದರೂ ವಿವರಗಳಲ್ಲಿ ಪ್ರಾದೇಶಿಕ ವೈವಿಧ್ಯವಿದ್ದೇ ಇರುತ್ತದೆ.

ಕಥೆ ಎಂಬ ಮಾತು ಒಂದು ಕಡೆ ಕಾದಂಬರಿಗೂ ಇನ್ನೊಂದು ಕಡೆ ಸಣ್ಣ ಕಥೆಗೂ ಈಚೆಗೆ ಬಳಕೆಗೆ ಬಂದಿದೆ. ಹಾಗೆ ನೋಡಿದರೆ ಮಹಾಕಾವ್ಯ ಕಥೆಯಾಗಬಹುದಾದರೆ ನಾಟಕವೂ ಕಥೆಯಾದೀತು. ಕಾದಂಬರಿಯ ಕ್ಷೇತ್ರ ವಿಶಾಲವಾದುದು. ಹತ್ತಾರು ಘಟನೆಗಳ, ಹತ್ತಾರು ವ್ಯಕ್ತಿಗಳ ಜೀವನ ಸಂಕೀರ್ಣತೆಯನ್ನಲ್ಲಿ ಕಾಣುತ್ತೇವೆ. ಕಾದಂಬರಿ ಕ್ಷೇತ್ರ ದಿನದಿನಕ್ಕೆ ವಿಶಾಲವಾಗುತ್ತಿದೆ. ಸಾಮಾಜಿಕ, ಚಾರಿತ್ರಿಕ, ವಿಡಂಬನಾತ್ಮಕ, ಪತ್ತೇದಾರಿ, ಅದ್ಭುತರಮ್ಯ, ತಾತ್ತ್ವಿಕ, ಸಾಕ್ಷ್ಯ-ಮಾದರಿಗಳಲ್ಲಿ ಬಹು ಉತ್ತಮ ಕೃತಿಗಳು ಅಲ್ಲಿ ಕಾಣಸಿಗುತ್ತವೆ. ಕಾದಂಬರಿ ಬಹು ಜನಪ್ರಿಯ ಪ್ರಕಾರವೂ ಹೌದು.

ಸಣ್ಣ ಕಥೆ ಅದರ ಹೆಸರೇ ತಿಳಿಸುವಂತೆ ಗಾತ್ರದಲ್ಲಿ ಚಿಕ್ಕದು. ಆದರೆ ಪ್ರಭಾವದಲ್ಲಿ ಭಾವಗೀತೆಯಷ್ಟು ತೀವ್ರವಾದುದು. ಬಿಸಿಬಿಸಿಯಾದ ಯಾವುದೋ ಒಂದು ಘಟನೆಯನ್ನದು ಎತ್ತಿಕೊಂಡು ನೇರವಾಗಿ ಸ್ವಲ್ಪದರಲ್ಲಿ ಹೇಳಿ ಮುಗಿಸುತ್ತದೆ. ಕಥೆ ಇಲ್ಲಿ ಪಂದ್ಯದ ಕುದರೆಯಂತೆ. ನೇರ ಗುರಿ ಮುಟ್ಟುವುದೇ ಅದರ ಉದ್ದೇಶ.

ಇದು ಕಥಾಸಾಹಿತ್ಯದ ಸ್ಥೂಲ ವಿವರ. ಹೆಚ್ಚಿನ ವಿಷಯಗಳಿಗೆ-(ನೋಡಿ-ಅಜ್ಜಿಕಥೆ) (ನೋಡಿ-ಕಟ್ಟುಕಥೆ) (ನೋಡಿ-ಕಾದಂಬರಿ) (ನೋಡಿ-ಮಹಾಕಾವ್ಯ) (ನೋಡಿ- ಕನ್ನಡದಲ್ಲಿ-ಸಣ್ಣ-ಕಥೆಗಳು) ಇನ್ನೂ ಹೆಚ್ಚಿನ ಸಂಗತಿಗಳಿಗೆ ಆಯಾ ದೇಶಗಳ ಸಾಹಿತ್ಯ ವಿಭಾಗಗಳನ್ನು ನೋಡಿ. 
ಪ್ರಕೃತ ಲೇಖನದಲ್ಲಿ ಭಾರತೀಯ ಕಥಾಸಾಹಿತ್ಯವನ್ನು ವಿವೇಚಿಸಲಾಗಿದೆ.

ಕಥೆಗಳನ್ನು ಕೇಳುವುದೆಂದರೆ ಮಕ್ಕಳು ಮೊದಲುಗೊಂಡು ಎಲ್ಲ ವಯಸ್ಸಿನವರಿಗೂ ಪ್ರೀತಿ ಎಂಬ ಮಾತು ಭರತಖಂಡದ ಜನರಿಗೆ ವಿಶೇಷವಾಗಿ ಅನ್ವಯಿಸುತ್ತದೆ. ಸಣ್ಣ ಮಕ್ಕಳು ಹಾಸಿಗೆಯಲ್ಲಿ ಸುಖವಾಗಿ ಮಲಗಿಕೊಂಡು ನಿದ್ರಿಸುವುದಕ್ಕಿಂತ ಮುಂಚೆ ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಿದ್ದವೆಂದು ಬಾಣಭಟ್ಟ ತನ್ನ ಹರ್ಷಚರಿತದ 2ನೆಯ ಉಚ್ಛ್ವಾಸದ ಅಂತ್ಯದಲ್ಲಿಯೂ ಶೂದ್ರಕರಾಜ ಆಗಾಗ್ಯೆ ಆಖ್ಯಾಯಿಕಾ ಇತಿಹಾಸ ಪುರಾಣಗಳನ್ನು ಕೇಳುತ್ತ ಕಾಲವನ್ನು ಕಳೆಯುತ್ತಿದ್ದನಲ್ಲದೆ ಮಹಾರಾಣಿ ವಿಲಾಸವತಿಯ ಬಳಿಯಲ್ಲಿ ಅನೇಕ ಕಥೆಗಳನ್ನು ತಿಳಿದಿದ್ದ ಮುದಿ ಸಂನ್ಯಾಸಿಗಳಿದ್ದು ಪುಣ್ಯಕಥೆಗಳನ್ನು ಹೇಳುತ್ತಿದ್ದರೆಂದು ತನ್ನ ಕಾದಂಬರೀ ಕಾವ್ಯದಲ್ಲಿಯೂ ಹೇಳಿದ್ದಾನೆ. ಅನೇಕ ಪುರಾಣಗಳೂ ಕಥೆಗಳೂ ನೈಮಿಶಾರಣ್ಯದಲ್ಲಿ ಯಾಗ ಮಾಡುತ್ತಿದ್ದ ಶೌನಕಾದಿ ಮಹರ್ಷಿಗಳ ಕೋರಿಕೆಯಂತೆ ಸೂತಪುರಾಣಿಕನಿಂದ ಹೇಳಲ್ಪಟ್ಟವೆಂದು ಆಯಾ ಗ್ರಂಥಗಳಲ್ಲಿ ನಿರೂಪಿತವಾಗಿದೆ. ಮನುಷ್ಯರಿಗೆ ಮಾತ್ರವಲ್ಲ, ದೇವತೆಗಳಿಗೂ ಮೃಗಪಕ್ಷಿಗಳಿಗೂ ಕಥೆಯನ್ನು ಕೇಳುವುದರಲ್ಲಿ ಪ್ರೀತಿಯೆಂದು ಬೃಹತ್ಕಥೆಯ ವಿಷಯದಲ್ಲಿ ಕಥಾಸರಿತ್ಸಾಗರದಲ್ಲಿನ ಸಂಗತಿಯೊಂದು ತಿಳಿಸುತ್ತದೆ. ಅದರ ಪ್ರಕಾರ ಪಾರ್ವತೀದೇವಿ ಹೊಸದಾದ ಕಥೆಯನ್ನು ಹೇಳು ಎಂದು ಪರಮೇಶ್ವರನನ್ನು ಕೇಳಿಕೊಳ್ಳಲು ಆತ ಹೇಳಿದ ದೊಡ್ಡ ಕಥೆಯಲ್ಲಿನ (ಇದನ್ನೇ ಗುಣಾಢ್ಯ ಪೈಶಾಚಿ ಭಾಷೆಯಲ್ಲಿ ಬರೆದನೆಂದು ಪ್ರತೀತಿ) ಆರು ಲಕ್ಷ ಗ್ರಂಥ ಪರಿಮಾಣವುಳ್ಳ ಆರು ಕಥೆಗಳನ್ನು ಒಳಗೊಂಡ ಪತ್ರಗಳನ್ನು ಕಾಡಿನಲ್ಲಿ ಅಗ್ನಿಕುಂಡದಲ್ಲಿ ಹಾಕುವುದಕ್ಕೆ ಮೊದಲು ಓದುತ್ತಿದ್ದಾಗ ಅಲ್ಲಿದ್ದ ಮೃಗಪಕ್ಷಿಗಳೆಲ್ಲವೂ ಅಲ್ಲಿಗೆ ಬಂದು ಆಹಾರದ ಮೇಲೆಯೂ ಲಕ್ಷ್ಯವಿಲ್ಲದೆ ಅತ್ಯಂತ ಆದರದಿಂದ ಕೇಳುತ್ತಿದ್ದವಂತೆ.
ಸಂಸ್ಕೃತ ವಾಙ್ಮಯದಲ್ಲಿ ಅತ್ಯಂತ ಪ್ರಾಚೀನವಾದ ಋಕ್ಸಂಹಿತೆಯ ಸೂಕ್ತಗಳಲ್ಲಿಯೂ ಕಥೆಗಳ ಪ್ರಸ್ತಾಪವಿದೆ. 1.179ನೆಯ ಸೂಕ್ತದಲ್ಲಿ ಅಗಸ್ತ್ಯ ಲೋಪಾಮುದ್ರೆಯರ ಸಂವಾದವೂ 10.95ನೆಯ ಸೂಕ್ತದಲ್ಲಿ ಉರ್ವಶೀ ಪುರೂರವರುಗಳ ಸಂವಾದವೂ ಪ್ರಸ್ತುತವಾಗಿದೆ. 7.71.5ನೆಯ ಮಂತ್ರದಲ್ಲಿಯೂ ಇನ್ನೂ ಕೆಲವು ಮಂತ್ರಗಳಲ್ಲಿಯೂ ಅಶ್ವಿನೀದೇವತೆಗಳು ಚ್ಯವನಋಷಿಯ ಜರೆಯನ್ನು ಹೋಗಲಾಡಿಸಿ ಅವನನ್ನು ತರುಣನನ್ನಾಗಿ ಮಾಡಿದ ಕಥೆಯ ಪ್ರಸ್ತಾಪವಿದೆ. ಈ ಕಥೆಗಳೆಲ್ಲವೂ ಮಹಾಭಾರತದಲ್ಲಿಯೂ ಪುರಾಣಗಳಲ್ಲಿಯೂ ವಿಸ್ತಾರವಾಗಿ ವರ್ಣಿಸಲ್ಪಟ್ಟಿವೆ.
ಋಕ್ಸಂಹಿತೆಯ 4.19.9ನೆಯ ಮಂತ್ರದ ಉತ್ತರಾರ್ಧದಲ್ಲಿಯೂ 10.28.4ನೆಯ ಮಂತ್ರದ 3ನೆಯ ಪಾದದಲ್ಲಿಯೂ ಪ್ರಸ್ತುತವಾದುವು ಪೌರಾಣಿಕ ಕಥೆಗಳಲ್ಲ. ಈ ಮಂತ್ರಗಳಲ್ಲಿ (ಲಾಟೀಯ) ಪಂಚತಂತ್ರದಲ್ಲಿ ಹೇಳಲ್ಪಟ್ಟಿರುವ ಕುರುಡ, ಕುಬ್ಜ ಮತ್ತು ತ್ರಿಸ್ತನಿ ಮತ್ತು ನರಿಯೂ ಸಿಂಹವೂ ಮಾತನಾಡುವ ಬಿಲವೂ ಎಂಬ ಕಥೆಗಳ ಪ್ರಸ್ತಾಪವಿರುವುದೆಂದೂ ಊಹಿಸಲಾಗಿದೆ.

ಹೀಗೆಯೆ ಕೃಷ್ಣಯಜುಸ್ಸಂಹಿತೆಗಳಲ್ಲಿಯೂ ಬ್ರಾಹ್ಮಣಗಳಲ್ಲಿಯೂ ಅನೇಕ ಕಥೆಗಳಿವೆ. ಪುರಾಣಗಳೂ ಇತಿಹಾಸಗಳೂ ಕಥೆಗಳ ಸಮೂಹಗಳು. ಹೀಗೆಯೇ ಮಹಾತ್ಮ್ಯೆಗಳಲ್ಲಿಯೂ ಸ್ಥಳಪುರಾಣಗಳಲ್ಲಿಯೂ ಅನೇಕ ಕಥೆಗಳು ಇವೆ. ಕವಿ ಕಲ್ಪಿತವಾದ ಕಥೆಗಳು ಬಾಣನ ಕಾದಂಬರೀ, ಸುಬಂಧುವಿನ ವಾಸವದತ್ತಾ, ತಿಲಕಮಂಜರೀ ಮೊದಲಾದ ಗ್ರಂಥಗಳಲ್ಲಿವೆ. ಈ ಗ್ರಂಥಗಳಲ್ಲಿ ಆ ಹೆಸರಿನ ರಾಜಕುಮಾರಿಯರ ಕಥೆ ವರ್ಣಿತವಾಗಿದೆ. ಗ್ರಂಥಗಳು ಬಹಳ ಪ್ರೌಢಶೈಲಿಯಲ್ಲಿವೆ. ಪೌರಾಣಿಕ ಮತ್ತು ಕವಿಕಲ್ಪಿತವೆಂಬ ಎರಡು ಜಾತಿಯ ಕಥೆಗಳಲ್ಲದೆ ಜನಸಾಮಾನ್ಯರ ನಡತೆಯನ್ನು ನಿರೂಪಿಸುವ ಕಥೆಗಳೂ ಅನೇಕವುಂಟು. ಇವುಗಳನ್ನು ನಾಡಕಥೆಗಳು ಜಾನಪದ ಕಥೆಗಳು ಎನ್ನಬಹುದು. ಇಂಥ ಕಥೆಗಳ ಸಂಕಲನಗಳೆಂದರೆ-ಪಂಚತಂತ್ರ, ಬೃಹತ್ಕಥೆ (ಕಥಾಸರಿತ್ಸಾಗರ, ಬೃಹತ್ಕಥಾಮಂಜರೀ, ಬೃಹತ್ಕಥಾ ಶ್ಲೋಕ ಸಂಗ್ರಹ) ವೇತಾಲಪಂಚವಿಂಶತಿ, ಶುಕಸಪ್ತತಿ ಮೊದಲಾದುವು.

ಶುಕಸಪ್ತತಿಯ ಎರಡು ಪಾಠಗಳು (ಶುಕಸಪ್ತತಿ; ಶುಕಸಪ್ತತಿಯ ಬೃಹತ್ಪಾಠ) ಷ್ಮಿಟ್ ಮಹಾಶಯನಿಂದ ಜರ್ಮನಿಯಲ್ಲಿ ಪ್ರಕಾಶಗೊಂಡಿವೆ. ಮೂಲ ಶುಕಸಪ್ತತಿ ಮೂಲ ಪಂಚತಂತ್ರದಂತೆ ನಷ್ಟವಾಗಿದೆ. ಈ ಗ್ರಂಥ ಯಾವಾಗ ಯಾರಿಂದ ಬರೆಯಲ್ಪಟ್ಟಿತೆಂಬುದು ತಿಳಿಯದು. ಇದರ ಕಾಲ ಪ್ರ.ಶ. 1165ಕ್ಕೂ ಹಿಂದಿನದೆಂದೂ ಕರ್ತೃ ಚಿಂತಾಮಣಿಭಟ್ಟನೆಂದೂ ಸದ್ಯಕ್ಕೆ ಹೇಳಬಹುದು.

ಹೆಸರಿಗೆ ಅನುಗುಣವಾಗಿ ಶುಕಸಪ್ತತಿಯಲ್ಲಿ 70 ಕಥೆಗಳಿವೆ. ಹರದತ್ತನೆಂಬ ವ್ಯಾಪಾರಿಗೆ ಪ್ರಭಾವತಿ ಎಂಬ ಹೆಂಡತಿಯಿರುವಳು. ಒಂದು ಬಾರಿ ಅವನು ವ್ಯಾಪಾರಕ್ಕಾಗಿ ಊರನ್ನು ಬಿಟ್ಟು ಹೋಗುವುದಕ್ಕಿಂತ ಮುಂಚೆ ತಾನು ಸಾಕಿದ ಒಂದು ಗಿಣಿಗೆ ಪ್ರಭಾವತಿ ದುರ್ನಡತೆಯವಳಾಗದಂತೆ ಜಾಗರೂಕತೆಯಿಂದ ನೋಡಿಕೊಳ್ಳಲು ಹೇಳಿ ಪ್ರಯಾಣ ಮಾಡುತ್ತಾನೆ. ಕೆಲವು ದಿನಗಳ ಮೇಲೆ ಪರಪುರುಷನ ಬಳಿಗೆ ಹೋಗಲು ಸಿದ್ಧವಾಗತೊಡಗುವ ಪ್ರಭಾವತಿಯನ್ನು ಕುರಿತು ಪಂಜರದ ಗಿಣಿ ರೂಪಿಣಿಯೆಂಬೊಬ್ಬಳಿಗೆ ಅಂಥದೇ ಸಂದರ್ಭದಲ್ಲಿ ಒದಗಿದ ವಿಪತ್ತಿನ ಕಥೆಯನ್ನು ಹೇಳಿ ಪ್ರಭಾವತಿ ತನಗೆ ಬರಬಹುದಾದ ವಿಪತ್ತನ್ನು ನಿವಾರಿಸುವ ಉಪಾಯವನ್ನು ಯೋಚಿಸಲು ಸಲಹೆ ಮಾಡುತ್ತದೆ. ಭ್ರಾಂತಳಾದ ಪ್ರಭಾವತಿಗೆ ಯಾವ ಉಪಾಯವೂ ಹೊಳೆಯುವುದಿಲ್ಲ. ಆಗ ಗಿಣಿ ಅವಳಿಗೆ ರೂಪಿಣಿ ಹೂಡಿದ ಉಪಾಯದ ಕಥೆಯನ್ನು ಹೇಳುತ್ತದೆ. ಅದು ಮುಗಿಯುವಲ್ಲಿ ಅಂದಿನ ರಾತ್ರಿ ಕಳೆದು ಹೋಗಿರುತ್ತದೆ. ಹೀಗೆಯೇ ಎಪ್ಪತ್ತು ಕಥೆಗಳನ್ನೂ ಹೇಳಿ ಮುಗಿಸುವಲ್ಲಿ 70 ದಿವಸಗಳು ಕಳೆದು ಪ್ರಭಾವತಿಯ ಪತಿ ಹಿಂತಿರುಗಿ ಬರುತ್ತಾನೆ.

ಶುಕಸಪ್ತತಿಯ ಬೃಹತ್ಪಾಠದಲ್ಲಿ ಶುಕಸಪ್ತತಿಯಲ್ಲಿ ಇಲ್ಲದ ಅನೇಕ ಕಥೆಗಳಿವೆ. ಪ್ರ.ಶ. 1329ರಲ್ಲಿ ನೆಕ್ಶೆಬಿ ಎಂಬವನು ಪಾರ್ಸಿ ಭಾಷೆಯಲ್ಲಿ ಮಾಡಿದ ಶುಕ ಸಪ್ತತಿಯ ಅನುವಾದದಲ್ಲಿಯೂ (ತೂತಿನಾಮೆ) ಮೇಲೆ ಹೇಳಿದ ಎರಡು ಶುಕ ಸಪ್ತತಿಗಳಲ್ಲಿಯೂ ಇಲ್ಲದ ಅನೇಕ ಕಥೆಗಳಿವೆ. ಇಂಥ ಕಥೆಗಳೆಲ್ಲವೂ ಈಗ ನಮಗೆ ದೊರೆತಿಲ್ಲದ ಶುಕಸಪ್ತತಿ ಪಾಠಾಂತರಗಳಲ್ಲಿ ಇದ್ದವೆಂದು ಊಹಿಸಲಾಗಿದೆ. ನೆಕ್ಶೆಬಿಯ ತೂತಿನಾಮೆ ಶಾ ಅಬ್ದುಲ್ಲಾ ಎಫೆಂಡಿ ಎಂಬುವನಿಂದ ತುರ್ಕಿ ಭಾಷೆಗೆ ಅನುವಾದಗೊಂಡಿದೆ. ಪ್ರ.ಶ. ಸು. 18ನೆಯ ಶತಮಾನದ ಅಂತ್ಯದಲ್ಲಿದು ಪಾರ್ಸೀಭಾಷೆಗೆ ತರ್ಜುಮೆಗೊಂಡಿದೆ. ಅಲ್ಲದೆ ಈಚೆಗೆ ಭರತಖಂಡದ ಅನೇಕ ಭಾಷೆಗಳಿಗೂ ಮಲಯ ಮತ್ತು ಜಾವಾ ದ್ವೀಪಗಳ ಭಾಷೆಗಳಿಗೂ ಅನುವಾದಗೊಂಡಿದೆ.

ಪಂಚತಂತ್ರದ ಕಥೆಗಳಂತೆ ಶುಕಸಪ್ತತಿಯ ಕೆಲವು ಕಥೆಗಳೂ ವಿಶ್ವದ ನಾನಾ ದೇಶಗಳಿಗೆ ಹರಡಿರುವುದನ್ನು ನೋಡಿದರೆ ಅದರ ಪ್ರಾಮುಖ್ಯ ಸ್ವಯಂ ವಿಧಿತವಾಗುತ್ತದೆ.

ಶ್ಲೋಕ ಛಂದಸ್ಸಿನಲ್ಲಿದ್ದು ಸದಾಚಾರವನ್ನು ಬೋಧಿಸುವ ದಿನಾಲಾಪನಿಕಾ ಶುಕಸಪ್ತತಿಯೆಂಬ ಗ್ರಂಥವೂ ಬಹಳ ಅರ್ವಾಚೀನವಾದುದು.
ಇನ್ನೊಂದು ಪ್ರಭಾವೀ ಕಥಾಗ್ರಂಥವೆಂದರೆ ವೇತಾಲಪಂಚವಿಂಶತಿ. ಅದರಲ್ಲಿ 25 ಕಥೆಗಳಿವೆ. ತ್ರಿವಿಕ್ರಮಸೇನನೆಂಬ ರಾಜ ತನ್ನನ್ನು ಬಹುಕಾಲ ಆಶ್ರಯಿಸಿದ ಒಬ್ಬ ಶ್ರಮಣನ ಕೋರಿಕೆಗನುಸಾರವಾಗಿ ಶ್ಮಶಾನದಲ್ಲಿ ಒಂದು ವೃಕ್ಷಕ್ಕೆ ನೇತು ಕೊಂಡಿದ್ದ ಶವವನ್ನು ತಂದುಕೊಡಲು ಒಪ್ಪಿಕೊಳ್ಳುತ್ತಾನೆ. ಶವವನ್ನು ಮರದಿಂದ ಇಳಿಸಿ ಬೆನ್ನಿನ ಮೇಲೆ ಹೊತ್ತುಕೊಂಡು ಹಿಂದಿರುಗುತ್ತಿರುವಾಗ ಒಂದು ಬೇತಾಳ ಶವದೊಳಕ್ಕೆ ಪ್ರವೇಶಿಸಿ ದಾರಿಸಾಗುವುದಕ್ಕಾಗಿ ರಾಜನಿಗೆ ಒಂದು ಕಥೆ ಹೇಳುತ್ತದೆ. ಮುಗಿದ ಅನಂತರ ಅದಕ್ಕೆ ಸಂಬಂಧಿಸಿದಂತೆ ರಾಜನಿಗೆ ಒಂದು ಪ್ರಶ್ನೆ ಹಾಕುತ್ತದೆ. ಅದಕ್ಕೆ ರಾಜ ಸಮಂಜಸವಾದ ಉತ್ತರ ಕೊಡಬೇಕು. ತಿಳಿದೂ ತಿಳಿದೂ ಉತ್ತರ ಕೊಡುತ್ತಾನೆ. ಬೇತಾಳ ಶವದೊಂದಿಗೆ ಮತ್ತೆ ಮರಹತ್ತಿ ಕೂಡುತ್ತದೆ. ಹೀಗೆ ಇಪ್ಪತ್ತು ನಾಲ್ಕು ಬಾರಿ ವಿಕ್ರಮಸೇನ ಶವವನ್ನು ಇಳಿಸಿ ತಂದು ಬೇತಾಳದ ಬಾಯಿಂದ ಇಪ್ಪತ್ತುನಾಲ್ಕು ಕಥೆ ಕೇಳಿ ಅದು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾನೆ. ಇಪ್ಪತ್ತೈದನೆಯ ಬಾರಿ ಮರುಕಗೊಂಡ ಬೇತಾಳ ವಿಕ್ರಮನಿಗೆ ಶ್ರಮಣಕ ಅವನನ್ನು ಕೊಲ್ಲಲು ಮಾಡಿದ ಒಳಸಂಚನ್ನು ತಿಳಿಸಿ, ತಾನು ಹೇಳಿದ ಹಾಗೆ ವರ್ತಿಸಿದಲ್ಲಿ ವಿಕ್ರಮನ ಸೇವಕನಾಗುವುದಾಗಿ ಭರವಸೆ ಕೊಡುತ್ತದೆ.
ವೇತಾಲಪಂಚವಿಂಶತಿ ಬೃಹತ್ಕಥಾಮಂಜರಿಯಲ್ಲಿಯೂ ಕಥಾಸರಿತ್ಸಾಗರದಲ್ಲಿಯೂ ಶ್ಲೋಕ ರೂಪದಲ್ಲಿ ಇದೆ. ಅಲ್ಲದೆ ಗದ್ಯ ರೂಪದಲ್ಲಿ ಜಂಭಲದತ್ತನಿಂದಲೂ ಶಿವದಾಸನಿಂದಲೂ ರಚಿತವಾಗಿದೆ. ಪಂಚತಂತ್ರದಲ್ಲಿರುವಂತೆ ಶಿವದಾಸನ ಗ್ರಂಥದಲ್ಲಿ ಅನೇಕ ಶ್ಲೋಕಗಳಿವೆ. ವೇತಾಲಪಂಚವಿಂಶತಿಯ ಕಥೆಗಳಲ್ಲಿ ಕೆಲವು ವಿಶ್ವದ ನಾನಾದೇಶಗಳಿಗೆ ಹರಡಿವೆ. ಈ ಗ್ರಂಥವೂ ಇಂಗ್ಲಿಷ್ ಜರ್ಮನ್ ಮೊದಲಾದ ಭಾಷೆಗಳಿಗೂ ಭರತಖಂಡದ ನಾನಾ ಭಾಷೆಗಳಿಗೂ ಅನುವಾದಗೊಂಡಿದೆ. ಇಂಥ ಕೆಲವು ಅನುವಾದಗಳಲ್ಲಿ ತ್ರಿವಿಕ್ರಮಸೇನ ಎಂಬ ಹೆಸರಿಗೆ ಬದಲು ವಿಕ್ರಮಾದಿತ್ಯ ಎಂದಿದೆ.

ವಿಕ್ರಮಾದಿತ್ಯನ ಸಂಬಂಧವಾದ ಕಥೆಗಳು ಸಿಂಹಾಸನ ದ್ವಾತ್ರಿಂಶಿಕಾ ಎಂಬ ಪುಸ್ತಕದಲ್ಲಿಯೂ ಸಂಕಲಿತವಾಗಿವೆ. ಈ ಗ್ರಂಥಕ್ಕೆ ವಿಕ್ರಮಚರಿತ, ವಿಕ್ರಮಾರ್ಕ ಚರಿತ ಎಂದೂ ಹೆಸರುಗಳಿವೆ. ಇದರಲ್ಲಿ ಅನೇಕ ಪಾಠಪ್ರಭೇದಗಳಿದ್ದು ಕೆಲವು ಬರೀ ಪದ್ಯದಲ್ಲಿ ಕೆಲವು ಬರೀ ಗದ್ಯದಲ್ಲಿ, ಇವೆ. ಇನ್ನು ಕೆಲವಲ್ಲಿ ಪದ್ಯಗದ್ಯಗಳೆರಡೂ ಇವೆ. ಗ್ರಂಥದ ಮುಖಕಥೆ ಅಥವ ಕಥಾಮುಖ ಹೀಗಿದೆ: ವಿಕ್ರಮಾದಿತ್ಯ ಕಾಲವಾದ ಅನಂತರ ದೇವೇಂದ್ರ ಅವನಿಗೆ ಕೊಟ್ಟಿದ್ದ ಸಿಂಹಾಸನ ಭೂಮಿಯಲ್ಲಿ ಹೂತು ಹೋಗಿ ಕಾಲಕ್ರಮದಲ್ಲಿ ಭೋಜರಾಜನ ಕೈಸೇರಿತು. ಈ ರಾಜ ಒಳ್ಳೆಯ ಮುಹೂರ್ತವನ್ನು ನೋಡಿ ಅದರಲ್ಲಿ ಹತ್ತಿ ಕುಳಿತುಕೊಳ್ಳಲು ಉದ್ಯುಕ್ತನಾದಾಗ ಆ ಸಿಂಹಾಸನದ ಮೆಟ್ಟಲುಗಳಲ್ಲಿದ್ದ 32 ಸಾಲಭಂಜಿಕೆಗಳಲ್ಲಿ ಮೊದಲನೆಯದು ಅವನನ್ನು ತಡೆದು ವಿಕ್ರಮಾದಿತ್ಯನಿಗೆ ಇದ್ದ ಶೌರ್ಯವೂ ಸಾಹಸವೂ ಔದಾರ್ಯವೂ ಇದ್ದವರೇ ಆ ಸಿಂಹಾಸನವನ್ನು ಹತ್ತುವದಕ್ಕೆ ಅರ್ಹರು ಎಂದು ಅಂದು ವಿಕ್ರಮಾದಿತ್ಯನ ಗುಣ ಕಥನರೂಪವಾದ ಒಂದು ಕಥೆಯನ್ನು ಹೇಳುತ್ತದೆ. ಹೀಗೆಯೇ ಉಳಿದ 31 ಸಾಲ ಭಂಜಿಕೆಗಳೂ ಒಂದೊಂದು ಕಥೆಯನ್ನು ಹೇಳುತ್ತವೆ. 32ನೆಯ ದಿನ ಸಾಲಭಂಜಿಕೆಗಳಾಗಿದ್ದ ಅಪ್ಸರಸ್ತ್ರೀಯರಿಗೆ ಶಾಪವಿಮೋಚನೆಯಾಗಿ ಸಿಂಹಾಸನವೂ ಅವರೂ ಸ್ವರ್ಗಕ್ಕೆ ಹೋಗುತ್ತಾರೆ.

ಈ ಗ್ರಂಥವು ಭರತಖಂಡದ ನಾನಾ ಭಾಷೆಗಳಿಗೂ ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಿಗೂ ಸಯಾಂ ದೇಶದ ಥಾೃಭಾಷೆಗೂ ಅನುವಾದಗೊಂಡಿದೆ. ಮಂಗೋಲಿಯ ಭಾಷೆಯಲ್ಲೂ ಇದರ ಒಂದು ಅನುವಾದ ದೊರೆತಿದೆ.

ವಿಕ್ರಮೋದಯ ಎಂಬ ಶ್ಲೋಕರೂಪದ ಗ್ರಂಥದಲ್ಲಿ ವಿಕ್ರಮಾದಿತ್ಯ ಗಿಣಿಯ ರೂಪವನ್ನು ತಾಳಿ ಹೇಳಿದ ಕಥೆಗಳು ಬಂದಿವೆ. ವಿಕ್ರಮಾದಿತ್ಯನಿಗೂ ಶಾಲಿವಾಹನನಿಗೂ ನಡೆದ ಯುದ್ಧದ ಕಥೆ ಅನಂತನಿಂದ ವಿರಚಿತವಾದ ವೀರಚರಿತ್ರಾ ಎಂಬ ಪದ್ಯಗ್ರಂಥದಲ್ಲಿಯೂ, ಶಿವದಾಸ ವಿರಚಿತವಾದ ಗದ್ಯಪದ್ಯಗಳನ್ನೊಳಗೊಂಡ ಶಾಲಿವಾಹನಕಥಾ ಎಂಬ ಪುಸ್ತಕದಲ್ಲಿಯೂ ಬಂದಿದೆ.

ದಂಡಿಯಿಂದ (ಪ್ರ.ಶ.ಪು. ಸು. 700 ಕ್ಕೂ ಹಿಂದೆ) ರಚಿತವಾದ ದಶಕುಮಾರ ಚರಿತದಲ್ಲಿ ಒಂದು ಪುರ್ವ ಪೀಠಿಕೆಯೂ ಹತ್ತು ಕಥೆಗಳ ಒಂದು ಉತ್ತರ ಪೀಠಿಕೆಯೂ ಇದ್ದುವೆಂದು ತೋರುತ್ತದೆ. ಈಗ ಪ್ರಚಾರವಾಗಿರುವ ಪುಸ್ತಕದಲ್ಲಿರುವ ಕೊನೆಯ ಏಳು ಕಥೆಗಳು ಮಾತ್ರ ದಂಡಿಯ ಗ್ರಂಥದ್ದು, ಪುರ್ವ ಪೀಠಿಕೆಯೂ ಮೊದಲ ಮೂರು ಕಥೆಗಳೂ ಬೇರೊಬ್ಬರಿಂದ ರಚಿತವಾದವು. ವಿನಾಯಕನಿಂದ ಶ್ಲೋಕರೂಪದಲ್ಲಿ ರಚಿತವಾಗಿರುವ ದಶಕುಮಾರಚರಿತ ಪುರ್ವ ಪೀಠಿಕೆ. ಅಪ್ಪಯ್ಯ ಮಂತ್ರಿಯಿಂದ ರಚಿತವಾದ ದಶಕುಮಾರಚರಿತ ಕಥಾಸಾರ, ದೀಕ್ಷಿತ ಚಕ್ರಪಾಣಿಯಿಂದ ರಚಿತವಾದ ಐದು ಉಚ್ಛ್ವಾಸಗಳುಳ್ಳ ದಶಕಿಮಾರ ಕಥಾಶೇಷ-ಈ ಗ್ರಂಥಗಳಲ್ಲಿ ದಶಕುಮಾರಚರಿತದ ಕಥೆ ಪುರೈಕೆಗೊಂಡಿದೆ.
ಭರಟಕದ್ವಾತ್ರಿಂಶಿಕಾ, ಪಂಚದಂಡ ಛತ್ರ ಪ್ರಬಂಧ, ಶಿವದಾಸ ವಿರಚಿತ ಕಥಾರ್ಣವ, ಹರಿಭದ್ರ ವಿರಚಿತ ಧೂರ್ತಕಲ್ಯಾಣ, ವಿದ್ಯಾಪತಿ ರಚಿತ ಪುರುಷ ಪರೀಕ್ಷಾ-ಇವೂ ಕಥಾಸಂಕಲನಗಳು.

ಬಲ್ಲಾಳನ ಭೋಜಪ್ರಬಂಧ, ಮೇರಾತುಂಗನ ಪ್ರಬಂಧ ಚಿಂತಾಮಣಿ ಮತ್ತು ರಾಜಶೇಖರನ ಪ್ರಬಂಧಕೋಶದಲ್ಲಿ ಕಾಳಿದಾಸನೇ ಮೊದಲಾದ ಕವಿಗಳ ಸಂಬಂಧದಲ್ಲಿ ಅನೇಕ ಕಥೆಗಳಿವೆ. ಇವುಗಳಲ್ಲಿ ಬಹುಪಾಲು ಕಲ್ಪಿತ ಕಥೆಗಳು.

ಜೈನವಾಙ್ಮಯದಲ್ಲಿಯೂ ಕಥೆಗಳೂ ಕಥಾ ಗ್ರಂಥಗಳೂ ವಿಪುಲವಾಗಿವೆ. ಅರ್ಧಮಾಗಧಿಯಲ್ಲಿರುವ ಶ್ವೇತಾಂಬರ ಜೈನರ ಆಗಮ ಅಥವ ಸಿದ್ಧಾಂತ ಗ್ರಂಥಗಳಲ್ಲಿ ಅನೇಕ ಕಥೆಗಳಿವೆ. ಈ ಎಲ್ಲ ಕಥೆಗಳಲ್ಲಿಯೂ ಪ್ರಾಯಿಕವಾಗಿ ಅಲ್ಲಿ ಕೀರ್ತಿತರಾದ ಜನರ ಪುರ್ವಜನ್ಮದ ವಿಷಯವೂ ಅವರು ಜಿನಭಕ್ತರಾದ್ದರಿಂದ ಉಂಟಾದ ಶ್ರೇಯಸ್ಸೂ ವರ್ಣಿತವಾಗಿದೆ. ಅಲ್ಲಿನ ಒಂದು ಕಥೆ ಹೀಗಿದೆ: ಮಿಥಿಲೆಯ ರಾಜನ ಮಗಳಾದ ಮಲ್ಲಿಯನ್ನು ಮದುವೆಯಾಗಲು ಅರು ದೇಶದ ರಾಜಕುಮಾರರು ಪ್ರಯತ್ನಿಸುವರು. ಇವರಲ್ಲಿ ಯಾರೊಬ್ಬನಿಗೆ ಕೊಟ್ಟರೂ ಇತರರಿಗೆ ಅವಮಾನವಾಗುವುದರಿಂದ ತಂದೆ ಯಾರಿಗೂ ಮಗಳನ್ನು ಕೊಡುವುದಿಲ್ಲವೆಂದು ತಿಳಿಸುವನು. ಇದರಿಂದ ಕೋಪಗೊಂಡ ರಾಜಕುಮಾರರು ಒಂದಾಗಿ ಮಿಥಿಲೆಗೆ ಮುತ್ತಿಗೆ ಹಾಕುವರು. ಈ ವಿಷಯವೆಲ್ಲವನ್ನೂ ದಿವ್ಯಜ್ಞಾನದಿಂದ ಮುಂಚೆಯೇ ಅರಿತಿದ್ದ ರಾಜಕುಮಾರಿ ಊರಿನಲ್ಲಿ ಒಂದು ಮೋಹನ ಗೃಹವನ್ನು ಮಾಡಿಸಿ ಅದರಲ್ಲಿ ತನ್ನಂತೆಯೇ ಕಾಣುವ ಒಂದು ಬೊಂಬೆಯನ್ನು ಮಾಡಿಸಿ ಆ ಬೊಂಬೆಯ ತಲೆಯಲ್ಲಿರುವ ರಂಧ್ರದಿಂದ ನಿತ್ಯವೂ ತಾನು ತಿನ್ನುವ ಆಹಾರದಲ್ಲಿ ಒಂದು ತುತ್ತನ್ನು ಹಾಕುತ್ತ ಬರುತ್ತಿದ್ದಳು. ಮುತ್ತಿಗೆ ಹಾಕಿದ್ದ ರಾಜಕುಮಾರರನ್ನು ಉಪಾಯವಾಗಿ ಮಲ್ಲಿ ಮೋಹನ ಗೃಹದ ಬಳಿಗೆ ಬರಮಾಡಿದಳು. ಅಲ್ಲಿ ಮಲ್ಲಿಯಂತಿದ್ದ ಬೊಂಬೆಯನ್ನು ಅವರು ವಿಸ್ಮಯದಿಂದ ನೋಡುತ್ತಿರಲಾಗಿ ಮಲ್ಲಿ ಅಲ್ಲಿಗೆ ಬಂದು ಬೊಂಬೆಯ ತಲೆಯಲ್ಲಿನ ರಂಧ್ರವನ್ನು ಮುಚ್ಚಿದ್ದ ಕಮಲವನ್ನು ತೆಗೆದುಬಿಡಲಾಗಿ ಒಳಗೆ ಬಹು ಕಾಲದಿಂದ ಶೇಖರಣೆಗೊಂಡು ಕೊಳೆತುಹೋಗಿದ್ದ ಆಹಾರ ಪದಾರ್ಥಗಳಿಂದ ಅಸಹ್ಯವಾದ ದುರ್ಗಂಧ ಎದ್ದಿತು. ರಾಜಕುಮಾರರೆಲ್ಲರಿಗೂ ಜುಗುಪ್ಸೆಯಾಯಿತು. ಹೆಣ್ಣಿನ ಶರೀರ ನೋಡುವುದಕ್ಕೆ ಹೀಗಿದ್ದರೂ ಒಳಗೆ ಅಷ್ಟೇ ಅಸಹ್ಯಪುರ್ಣವಾಗಿದೆ. ಆದ್ದರಿಂದ ಮೋಹ ಬೇಡ ಎಂದು ಮಲ್ಲಿ ಅವರಿಗೆ ತಿಳಿಯಹೇಳಿ ಅವರ ಪುರ್ವಜನ್ಮದ ಕಥೆಯೆಲ್ಲವನ್ನೂ ವಿವರಿಸಿ ತಾನು ಜೈನ ದೀಕ್ಷೆಯನ್ನು ಸ್ವೀಕರಿಸಿ ಸಿದ್ಧಿಯನ್ನು ಹೊಂದಿದಳು.

ದಿಗಂಬರ ಜೈನರ ಪುರಾಣಗಳಲ್ಲಿ ಸಂಸ್ಕೃತ ಭಾಷೆಯಲ್ಲಿ ಬರೆದ ಅನೇಕ ಕಥೆಗಳಿವೆ. ಮಹಾಪುರಾಣಗಳಲ್ಲಿ (ಪ್ರ.ಶ. 8ನೆಯ ಶತಮಾನ) 24 ತೀರ್ಥಂಕರರು, 12 ಚಕ್ರವರ್ತಿಗಳು, 9 ವಾಸುದೇವರು, 9 ಪ್ರತಿವಾಸುದೇವರು, 9 ಬಲರಾಮರು-ಹೀಗೆ 63 ಮಹಾಪುರುಷರ ಕಥೆಗಳಿವೆ. ಮಹಾವೀರಚರಿತ, ಯಶೋಧರ ಚರಿತ, ಪಾಶರ್ವ್‌ನಾಥಚರಿತ, ನೇಮಿನಾಥಚರಿತ ಮೊದಲಾದ ಚರಿತಗಳಲ್ಲಿಯೂ ಆಯಾ ತೀರ್ಥಂಕರರ ಕಥಾನಕಗಳಿವೆ. ಹೇಮಚಂದ್ರ ರಚಿಸಿದ (ಪ್ರ.ಶ. 12ನೆಯ ಶತಮಾನ) ತ್ರಿಷಷ್ಟಿಶಲಾಕಾಪುರುಷಚರಿತದಲ್ಲಿ ಮೇಲೆ ಹೇಳಿದ 63 ಮಹಾಪುರುಷರ ಕಥೆಯೂ ಪರಿಶಿಷ್ಟ ಪರ್ವದಲ್ಲಿ ಇನ್ನೂ ಅನೇಕ ಕಥೆಗಳೂ ವರ್ಣಿತವಾಗಿವೆ.

ಜೈನರಿಂದ ಕಥಾಪುಸ್ತಕಗಳೂ ರಚಿತವಾಗಿವೆ. ಸೋಮಚಂದ್ರನ ಕಥಾಮಹೋದಧಿ (ಪ್ರ.ಶ. 1448), ಶುಭಶೀಲಗಣಿಯ ಪಂಚಶತೀಪ್ರಬೋಧ ಸಂಬಂಧ (ಪ್ರ.ಶ. 1464)ಗಳಲ್ಲಿನ ಕಥೆಗಳ ಸಂಖ್ಯೆ 400ನ್ನು ಮೀರಿದೆ. ಹೇಮವಿಜಯನ ಕಥಾರತ್ನಾಕರ (ಪ್ರ.ಶ. 1600) ಸಂಸ್ಕೃತ ಗದ್ಯದಲ್ಲಿದ್ದು 258 ಕತೆಗಳನ್ನೊಳಗೊಂಡಿದೆ. ಉದಯ ಧರ್ಮಿಯ ಧರ್ಮಕಲ್ಪದ್ರುಮ (ಪ್ರ.ಶ. 1450), ಅಮಿತಗತಿಯ ಧರ್ಮಪರೀಕ್ಷಾ (ಪ್ರ.ಶ. 1014) ಇವು ಸಂಸ್ಕೃತ ಪದ್ಯಗಳಲ್ಲಿವೆ.

ಸಮ್ಯಕ್ತ್ವಕೌಮುದೀ, ಕಥಾಕೋಶ-ಇವು ಸಂಸ್ಕೃತದಲ್ಲಿವೆ. ಕಥಾಕೋಶವೊಂದು ಶ್ರೀಚಂದ್ರನಿಂದ (ಪ್ರ.ಶ. 1200ಕ್ಕಿಂತ ಹಿಂದೆ) ಅಪಭ್ರಂಶದಲ್ಲಿ ರಚಿತವಾಯಿತು.

ಹರಿಭದ್ರನ ಸಮರಾಇಚ್ಛ ಕಥಾ, ಮಲಯಸುಂದರೀ ಕಥಾ, ಪಾದಲಿಪ್ತ ಸೂರಿ ಬರೆದ ತರಂಗವತೀ ಗ್ರಂಥದ ಸಂಕ್ಷೇಪವಾದ ತರಂಗಲೋಲಾ-ಇವು ಪ್ರಾಕೃತದಲ್ಲಿಯೂ ಧನಪಾಲನ ಭವಿಸ್ಸಕ್ತ ಕಹಾ ಅಪಭ್ರಂಶದಲ್ಲಿಯೂ ಬರೆಯಲ್ಪಟ್ಟಿವೆ. ಸಿದ್ಧರ್ಷಿ ಪ್ರ.ಶ. 906ರಲ್ಲಿ ಸಂಸ್ಕೃತದಲ್ಲಿ ಬರೆದ ಉಪಮಿತಿಭವ ಪ್ರಪಂಚಾ ಕಥಾ ಎಂಬ ದೊಡ್ಡ ಗದ್ಯಗ್ರಂಥದಲ್ಲಿ ಅನೇಕ ಒಳಕಥೆಗಳಿವೆ.
ದೊಡ್ಡ ಕಥೆಗಳಲ್ಲದೆ ಜೈನರಿಂದ ಸಂಸ್ಕೃತ ಶ್ಲೋಕರೂಪದಲ್ಲಿ ಕಥಾನಕಗಳು 100ಕ್ಕಿಂತ ಅಧಿಕವಾಗಿವೆ. ಜಿನಕೀರ್ತಿಯ ಚಂಪಕಶ್ರೇಷ್ಠಿ ಕಥಾನಕ (ಪ್ರ.ಶ. 1450), ಪಾಲಗೋಪಾಲ-ಕಥಾನಕ, ಉತ್ತಮಚರಿತ್ರ ಕಥಾನಕ, ಪಾಪಬುದ್ಧಿ ಧರ್ಮಬುದ್ಧಿ ಕಥಾನಕ__ಇವು ಈ ಜಾತಿಗೆ ಸೇರಿದುವು. ಕಾಲಕಾಚಾರ್ಯಕಥಾನಕ ಪ್ರಾಕೃತದಲ್ಲಿದೆ.

ಬೌದ್ಧ ಸಾಹಿತ್ಯದಲ್ಲಿಯೂ ಕಥೆಗಳೂ ಕಥಾಪುಸ್ತಕಗಳೂ ಅಧಿಕ ಸಂಖ್ಯೆಯಲ್ಲಿ ದೊರೆಯುತ್ತವೆ. ಹೀನಯಾನ ಆಗಮ ಗ್ರಂಥಗಳು ಪಾಲಿ ಭಾಷೆಯಲ್ಲಿವೆ. ಸುತ್ತಪಿಟಕದ ಖುದ್ದ ಕನಿಕಾಯದಲ್ಲಿರುವ ಜಾತಕತ್ಥ ವಣ್ಣಣಾ ಎಂಬ ಪುಸ್ತಕದಲ್ಲಿ ಗೌತಮ ಬುದ್ಧನ ಪುರ್ವಜನ್ಮಗಳಿಗೆ ಸಂಬಂಧಿಸಿದ 547 ಕಥೆಗಳಿವೆ. ಇದೇ ಖುದ್ದ ಕನಿಕಾಯದಲ್ಲಿರುವ ವಿಮಾನವತ್ಧು, ಪೇತವತ್ಧು, ಚರಿಯಾಪಿಟಕ ಎಂಬ ಗ್ರಂಥಗಳಲ್ಲಿಯೂ ಥೇರಗಾಥಾ ಮತ್ತು ಥೇರಿಗಾಥಾ ಎಂಬ ಪುಸ್ತಕಗಳಲ್ಲಿಯೂ ಅನೇಕ ಕಥೆಗಳಿವೆ.

ಬುದ್ಧಘೋಷನಿಂದ ಪಾಲಿಭಾಷೆಯಲ್ಲಿ ಬರೆಯಲ್ಪಟ್ಟ ಧಮ್ಮಪದದ ವ್ಯಾಖ್ಯಾನದಲ್ಲಿಯೂ ಅನೇಕ ಕಥೆಗಳಿವೆ.
ಗೌತಮಬುದ್ಧನ ಪುರ್ವಜನ್ಮದ ಕಥೆಗಳನ್ನು ವರ್ಣಿಸುವ ಹೀನಯಾನದ ಪಾಲಿ ಭಾಷೆಯ ಜಾತಕಕ್ಕೆ ಮಹಾಯಾನ ಬೌದ್ಧರಲ್ಲಿನ ಅವದಾನ ಸಂವಾದಿಯಾಗಿದೆ. ಮಹಾಯಾನ ಬೌದ್ಧರ ಇತರ ಗ್ರಂಥಗಳಂತೆ ಅವದಾನಗಳೂ ಅಶುದ್ಧ ಸಂಸ್ಕೃತದಲ್ಲಿ ಬರೆಯಲ್ಪಟ್ಟಿವೆ. ಮಹಾವಸ್ತು ಅವದಾನ ಇಂಥ ಗ್ರಂಥಗಳಲ್ಲಿ ಮುಖ್ಯವಾದುದೊಂದು. ಇದರಲ್ಲಿ ಬುದ್ಧನ ಪುರ್ವಜನ್ಮದ ಕಥೆಗಳಲ್ಲದೆ ನೂರಾರು ಇತರ ಕಥೆಗಳೂ ಇವೆ. ಅವದಾನ ಶತಕದಲ್ಲಿ (ಪ್ರ.ಶ. 250ಕ್ಕೆ ಹಿಂದಿನದು) 100 ಅವದಾನಗಳಿವೆ. ಕಲ್ಪದ್ರುಮಾವದಾನಮಾಲ, ಅಶೋಕಾವದಾನಮಾಲ, ರತ್ನಾವದದಾನಮಾಲ. ದ್ವಾವಿಂಶತ್ಯಾವದಾನ, ಭದ್ರಕಲ್ಪಾವದಾನ, ಕ್ಷೇಮೇಂದ್ರರಚಿತವಾದ ಅವದಾನ ಕಲ್ಪಲತಾ, ದಿವ್ಯಾವದಾನ, (ಪ್ರ.ಶ. 450ಕ್ಕೆ ಹಿಂದಿನದು),-ಆರ್ಯಶೂರನ ಜಾತಕ ಮಾಲ,-ಇವುಗಳಲ್ಲೆಲ್ಲ ಅನೇಕ ಕಥೆಗಳಿವೆ. ಇವುಗಳಲ್ಲಿ ಕೆಲವು ಪದ್ಯದಲ್ಲಿಯೂ ಕೆಲವು ಗದ್ಯದಲ್ಲಿಯೂ ಬರೆಯಲ್ಪಟ್ಟಿವೆ.

ಬುದ್ಧನ ಜನ್ಮಕಥೆ ಲಲಿತವಿಸ್ತಾರ ಎಂಬ ಗದ್ಯಗ್ರಂಥದಲ್ಲಿಯೂ (ಇದನ್ನು ಕಾವ್ಯವೆನ್ನಬಹುದು) ಅಶ್ವಘೋಷನ ಬುದ್ಧಚರಿತ ಕಾವ್ಯದಲ್ಲಿಯೂ (ಪ್ರ.ಶ. 2ನೆಯ ಶತಮಾನ) ವರ್ಣಿತವಾಗಿದೆ. ಅಶ್ವಘೋಷನ ಸೌಂದರನಂದ ಕಾವ್ಯದಲ್ಲಿ ದೇವದತ್ತನ ಮತ್ತು ಸುಂದರಿಯ ಕಥೆ ಬಂದಿದೆ.
ಪಾಲಿ ಭಾಷೆಯಲ್ಲಿರುವ ಗ್ರಂಥಗಳನ್ನು ಕುರಿತು ಒಂದು ವಿಷಯವನ್ನು ಮನಸ್ಸಿನಲ್ಲಿಡಬೇಕು. ಆ ಗ್ರಂಥಗಳು ಸಿಂಹಳದ್ವೀಪದ ವಿಹಾರಗಳಲ್ಲಿ ಭಿಕ್ಷುಗಳಿಂದ ಬರೆಯಲ್ಪಟ್ಟುವು. ಆದ್ದರಿಂದ ಆ ಪಾಲಿ ಪುಸ್ತಕಗಳಲ್ಲಿರುವ ನಿರೂಪಣೆ ಭರತಖಂಡದ ವಸ್ತುಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸುತ್ತದೆ ಎಂದು ತಿಳಿಯಲಾಗದು.

1848ರಲ್ಲಿ ಬಾನ್ ನಗರದಲ್ಲಿ ಸಂಸ್ಕೃತ ಪಂಚತಂತ್ರ ಪ್ರಕಟವಾದಾಗ, ಬೆನ್ಫೆ ಎಂಬ ಪಂಡಿತ ಅದನ್ನು ಜರ್ಮನ್ ಭಾಷೆಗೆ ಪರಿವರ್ತಿಸಿ ಯುರೋಪ್ ಖಂಡದ ನಾನಾ ದೇಶಗಳಲ್ಲಿ ಪ್ರಚಲಿತವಾಗಿದ್ದ ಕಥೆಗಳಿಗೂ ಪಂಚತಂತ್ರ ಕಥೆಗಳಿಗೂ ಇರುವ ಸಾದೃಶ್ಯವನ್ನು ಕುರಿತು ಅನೇಕ ಲೇಖನಗಳನ್ನು ಬರೆದ. ಇವನ್ನು ಓದಿದ ಅನಂತರ ಎಲ್ಲ ವಿಧವಾದ ಕಥೆಗಳಿಗೂ ಭರತಖಂಡವೇ ತೌರುಮನೆಯೆಂಬ ಅಭಿಪ್ರಾಯ ಕೆಲವು ವಿದ್ವಾಂಸರಲ್ಲಿ ಮೂಡಿಬಂತು. ಇನ್ನು ಕೆಲವರಿಗಾದರೆ  ಈ ಅಭಿಪ್ರಾಯ ಸಮ್ಮತವಾಗದೇ ಹೋದರೂ ಪಂಚತಂತ್ರದಲ್ಲಿರುವಂಥ, ಪ್ರಾಣಿಗಳು ಪರಸ್ಪರ ಮಾತನಾಡುವ ಕಥೆಗಳ (ಬೀಸ್ಟ್‌ ಫೇಬಲ್ಸ್‌) ವಿಷಯದಲ್ಲಿ ಮಾತ್ರ ಈ ಅಭಿಪ್ರಾಯ ಸಾಧ್ಯವಾದುದೆಂದು ಅವರು ವಾದಿಸಿದರು. ಇನ್ನು ಕೆಲವರಿಗಾದರೆ ಈ ವಿಧವಾದ ಎಲ್ಲ ಕಥೆಗಳ ವಿಷಯವಾಗಿಯೂ ಯಾವ ನಿರ್ಣಯವನ್ನು ಮಾಡುವುದೂ ತಪ್ಪೆಂದೂ ಒಂದೊಂದು ಕಥೆಯ ವಿಷಯವನ್ನೂ ಪರಿಶೀಲಿಸಿ ನೋಡಿ ಅದರ ಉತ್ಪತ್ತಿಸ್ಥಾನ ಭರತಖಂಡವೋ ಅಥವಾ ಗ್ರೀಸ್ ದೇಶವೋ ಎಂಬುದನ್ನು ನಿರ್ಣಯಿಸಬೇಕೆಂದೂ ಅಭಿಪ್ರಾಯಪಟ್ಟರು. ಮೇಲೆ ಹೇಳಿದಂತೆ ಋಕ್ಸ್‌ಂಹಿತೆಯ 10,28,4ನೆಯ ಮಂತ್ರದ 3ನೆಯ ಪಾದದಲ್ಲಿ ನರಿಯೂ ಸಿಂಹವೂ ಮಾತನಾಡುವ ಬಿಲವೂ ಎಂಬ ಪಂಚತಂತ್ರದ ಕಥೆಯ ಪ್ರಸ್ತಾಪವಿರುವುದೆಂಬ ಊಹೆ ನಿಜವಾಗಿದ್ದಲ್ಲಿ ಪ್ರಾಣಿಗಳು ಪರಸ್ಪರ ಮಾತನಾಡುವ ಕಥೆಗಳಿಗೆ ಭರತಖಂಡವೇ ತೌರುಮನೆಯೆಂಬ ಅಭಿಪ್ರಾಯ ಸಾಧುವಾದುದೆಂದು ಎಲ್ಲರೂ ಒಪ್ಪಬಹುದು.

ಅರೇಬಿಯನ್ ನೈಟ್ಸ್‌ ಎಂಬ ಪ್ರಸಿದ್ಧ ಗ್ರಂಥದ ಕಥಾಮುಖಕ್ಕೆ ಭರತಖಂಡವೇ ತೌರೂರೆಂದು ಕಾಸ್ಕಿನ್ ಎಂಬ ಪಂಡಿತ ನಿರ್ಣಯಿಸಿದ್ದಾನೆ. ಇನ್ನು ಕೆಲವರು ಈ ಕಥಾಮುಖ ನೇರವಾಗಿ ಭರತಖಂಡದಿಂದ ಬಂದಿಲ್ಲ, ಇದು ಪಾರ್ಸಿದೇಶದ ಪಾಲಿ ಭಾಷೆಯ ಅನುವಾದದ ಮೂಲಕ ಅರಬ್ಬೀ ಗ್ರಂಥಕ್ಕೆ ಬಂದಿದೆ ಎಂದು ಹೇಳುತ್ತಾರೆ. ಆ ಗ್ರಂಥದಲ್ಲಿರುವ ಅನೇಕ ಕಥೆಗಳ ಹುಟ್ಟೂರು ಭರತಖಂಡವೆಂಬುದನ್ನು ಎಲ್ಲ ಪಂಡಿತರೂ ಒಪ್ಪಿದ್ದಾರೆ.
ಸಿಂದ್ಬಾದ್ ನಾಮೆ ಎಂಬುದು ಶುಕಸಪ್ತತಿಯಂತೆ ಒಂದು ಕಥಾಪುಸ್ತಕ; ಈ ಪಾರ್ಸೀ ಪುಸ್ತಕ ಸಿರಿಯಾಕ್, ಅರಬ್ಬೀ, ಹೀಬ್ರೂ, ಗ್ರೀಕ್ ಮೊದಲಾದ ಭಾಷೆಗಳಲ್ಲೂ ಇದೆ. ಇದು ಭರತಖಂಡದಿಂದ ಬಂದಿತೆಂದು ಮಸೂದಿ (ಪ್ರ.ಶ. 956) ಎಂಬ ಅರಬ್ಬೀ ಲೇಖಕ ಹೇಳಿದ್ದಾನೆ. ಇದರ ಮೂಲ ಭರತಖಂಡದಲ್ಲಿ ದೊರೆತಿಲ್ಲ.

ಹೀಗೆ ಸಂಸ್ಕೃತ ಕಥಾಸಾಹಿತ್ಯ ಪ್ರಾಚೀನವೂ ವಿಪುಲವೂ ಆದ ಪರಂಪರೆಯನ್ನು ಹೊಂದಿದೆ. 	(ಎ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ